ಅನುಭವ 2

ಮನಶ್ಯಾಸ್ತ್ರದ ರೀತ್ಯ ನಿಯತ ಗಳಿಗೆಯಲ್ಲಿ ಅಥವಾ ಕಾಲದಲ್ಲಿ ವ್ಯಕ್ತಿ ಮಾನಸಿಕವಾಗಿ ಗ್ರಹಿಸುವುದೆಲ್ಲಕ್ಕೆ ಅಥವಾ ಅದರ ಒಂದು ಭಾಗಕ್ಕೆ ಈ ಹೆಸರಿದೆ. ಈ ಗ್ರಹಿಕೆ ಬಹು ಸಂಕೀರ್ಣವಾದುದು. ಇದರಲ್ಲಿ ಪ್ರಜ್ಞಾವಸ್ಥೆಯಂತೆ ಸುಪ್ತಮಾನಸ ಕ್ರಿಯೆಯೂ ಸೇರಿದೆಯಲ್ಲದೆ ಮಾತುಗಳ ಮೂಲಕ ವರ್ಣಿತವಾದಂತೆ ಮೂಕ ಅನುಭವಗಳೂ ಸೇರಿವೆ. ಇದು ಅನುಮಾನಾದಿಗಳ ಮುಖೇನ ಬಂದುದಲ್ಲ. ನೇರವಾದದ್ದು ಎಂಬ ವಾದವೂ ಇದೆ. ಇಂದ್ರಿಯಾನುಭವದಿಂದ ಬರುವ ತಿಳಿವಳಿಕೆಗೇ ಈ ಹೆಸರಿದೆಯೆಂದು ಮತ್ತೆ ಕೆಲವರ ವಾದ.

ಜೀವಿ ಲೌಕಿಕಪರಿಸರವನ್ನು ಅನುಸರಿಸಿ ಬದುಕಬೇಕು. ಈ ಪರಿಸರದಲ್ಲಿ ಸ್ಥಿರಾಂಶವೂ ಉಂಟು, ಅಸ್ಥಿರಾಂಶವೂ ಉಂಟು. ಜೀವಿ ತನ್ನ ಅನನ್ಯತೆಯನ್ನೂ ಉಳಿಸಿಕೊಳ್ಳಬೇಕಲ್ಲದೆ ತನ್ನ ಅಂಗಗಳ ಕ್ರಿಯಾಸಾಮಥ್ರ್ಯವನ್ನೂ ಹದದಲ್ಲಿಟ್ಟಿರಬೇಕು. ಆದಕಾರಣ ಒಂದು ಜೀವಿ ತನ್ನ ಅನನ್ಯತೆಯನ್ನೂ ಬೆಳೆವಣಿಗೆಯನ್ನೂ ಪುಷ್ಟಿಯನ್ನೂ ವಂಶಸಾತತ್ಯವನ್ನೂ ಕಾಪಾಡಿಕೊಳ್ಳಲು ಬಗೆಬಗೆಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ದೇಹದಲ್ಲಿನ ಜೀವಾಂಗಾಂಶಗಳು ಪರಿಸರದಲ್ಲಿರುವ ವಸ್ತುಗಳ ಭೌತ ಮತ್ತು ರಾಸಾಯನಿಕ ಗುಣಗಳಿಗೆ ಪ್ರತಿಕ್ರಿಯೆಯನ್ನು ತೋರುತ್ತವೆ. ದೈಹಿಕ ಕ್ರಿಯೆಗಳಲ್ಲಿ ಆಹಾರಸ್ಥೀಕರಣ ಮತ್ತು ಅದನ್ನು ವಿಶಿಷ್ಟ ಅಂಗಾಂಶಗಳನ್ನಾಗಿ ಪರಿವರ್ತಿಸುವ ಭೌತ-ರಾಸಾಯನಿಕ ಕ್ರಿಯೆ. ಬಾಹ್ಯಪ್ರಪಂಚದ ಪ್ರಚೋದನೆಗಳನ್ನು ಗ್ರಹಿಸಿ ಅವಕ್ಕೆ ತಕ್ಕಂತೆ ತನ್ನ ಅಂಗಗಳನ್ನು ಕೆಲಸದಲ್ಲಿ ತೊಡಗಿಸುವುದೋ ಅಥವಾ ಸ್ಥಳವನ್ನು ಬದಲಾಯಿಸುವುದೋ ಮುಂತಾದ ಆಯಾ ಪರಿಸ್ಥಿತಿಗೆ ತಕ್ಕ ಅನುಸರಣೆ-ಇವೇ ಮೊದಲಾದುವು ಸೇರುತ್ತವೆ.

ಒಂದು ಸಂಕೀರ್ಣಾವಯವಿ ಸಾಮಾನ್ಯವಾಗಿ ತನ್ನ ಹುಟ್ಟಿನಿಂದಲೇ ಭೌತ-ರಾಸಾಯನಿಕ ಮತ್ತು ಜೀವದ್ರವ್ಯ ಪರಿಣಾಮ ಸಂಧಾನದಿಂದ ತನ್ನನ್ನು ತಾನು ಕಾಪಾಡಿಕೊಳ್ಳಬಲ್ಲ ರೀತಿಯಲ್ಲಿ ದೇಹರಚನೆಯನ್ನು ಪಡೆದಿರುತ್ತದೆ. ಈ ದೇಹರಚನೆ ಬೆಳೆದು ಬಲಿತು ಅಭಿವೃದ್ಧಿಯಾಗಿ ಪರಿಸರಕ್ಕೆ ಯಶಸ್ವಿಯಾಗಿ ಹೊಂದಿಕೊಂಡು ಬಾಳುವ ಅವಕಾಶವನ್ನು ಆಗಾಗ ಹೆಚ್ಚಿಸಿಕೊಳ್ಳುತ್ತದೆ. ಹೀಗೆ ತಮ್ಮ ಪ್ರಾಣ ಸಂಸ್ಥೆಗೂ ಅದು ಬಾಳಬೇಕಾದ ಬಹಿರ್ಲೋಕಕ್ಕೂ ಇರುವ ವ್ಯವಹಾರದಲ್ಲಿ ಮನುಷ್ಯರೂ ತಮ್ಮ ಪರಿಸರದ ಪ್ರಜ್ಞೆಯನ್ನು ಪಡೆಯುತ್ತಾರೆ. ಅವರು ಬಗೆಬಗೆಯ ವಸ್ತುಗಳ ಪರಿಜ್ಞಾನವನ್ನು ಪಡೆದು, ತಮ್ಮ ಪರಿಸರವನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಿಕೊಂಡು ಸುಖವಾಗಿರಲು ಯತ್ನಿಸುತ್ತಾರೆ. ಇದರಿಂದ ಹೊಂದುವಣೆ ಮಾಡಿಕೊಳ್ಳುವುದರಲ್ಲಿ ಅವರು ವರಿಷ್ಠರೆನಿಸುತ್ತಾರೆ. ಅವರ ಅರಿವು. ಸಂವೇದನೆ, ಬಯಕೆ, ಮುಂತಾದವೆಲ್ಲ ಬಾಹ್ಯಪ್ರಪಂಚಕ್ಕೆ ತಮ್ಮ ಪ್ರತಿಕ್ರಿಯೆಗಳು ; ಆದರೆ ತಮ್ಮ ತಿಳಿವಳಿಕೆಗೆ ಬಂದಿರುವ ಭೌತವಸ್ತುಗಳ ಸಮಸ್ತಗುಣಗಳಿಗೂ ಹೊರತಾದ ಯಾವುದೋ ಒಂದು ವಿಲಕ್ಷಣಗುಣ ಇವುಗಳಲ್ಲಿದೆ. ಪ್ರಜ್ಞಾವಂತನಾದ ಮನುಷ್ಯ ತನ್ನ ಹಿಂದಿನ ಅನುಭವಗಳ ಆಧಾರದ ಮೇಲೆ ತನ್ನ ಪರಿಸರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ. ತನ್ನ ನಡೆವಳಿಕೆಯಲ್ಲಿನ ಈ ವ್ಯತ್ಯಾಸ ತನ್ನ ಹಿಂದಿನ ಅನುಭವಗಳ ಸ್ಮøತಿ, ಸದ್ಯಃಪರಿಸ್ಥಿತಿಯ ಪರಿಮಿತವಾದ ಗ್ರಹಿಕೆ, ಈ ಅನುಸರಣೆಯಿಂದ ಹೆಚ್ಚುಕಡಿಮೆ ತಾನು ನಿರೀಕ್ಷಿಸುವ ಪರಿಣಾಮ-ಇವುಗಳನ್ನು ಸೂಚಿಸುತ್ತದೆ. ಸೂಕ್ಷ್ಮಾತಿಸೂಕ್ಷ್ಮ ಏಕಕಣ ಜೀವಿಗಳಲ್ಲೂ ಈ ಗುಣಗಳು ಅಸಮಗ್ರರೂಪದಲ್ಲಿ ಕಂಡುಬರುತ್ತವೆ. ವಿಕಾಸಗೊಂಡಿರುವ ಪ್ರಾಣಿಗಳಲ್ಲಿ ಇವು ಸ್ಪಷ್ಟತರವಾಗಿ ಗೋಚರಿಸುತ್ತವೆ. ಗಿಡಗಳ ಚಟುವಟಿಕೆಗಳಲ್ಲಿ ಮಾತ್ರ ಹೀಗೆ ಕಲಿಯುವ ಕ್ರಮ ಕಂಡುಬರುವುದಿಲ್ಲವಾದರೂ ಪರಿಸರಕ್ಕೆ ತಕ್ಕಂತೆ ಅದು ತನ್ನ ಪ್ರಾಣಿಸಂಸ್ಥೆಯನ್ನು ಹೊಂದಿ, ಪ್ರತಿಭಟಿಸಿ, ಬಾಳು ಸಾಗಿಸಲು ನಿರಂತರ ಶ್ರಮಿಸುತ್ತದೆಂಬ ಅಂಶ ಸ್ಪಷ್ಟ.

ಪ್ರೌಢಮಾನವನಲ್ಲಿ ಬೋಧಾವಸ್ಥೆಯ ಅನುಭವ ಬಹುಮುಖವೂ ಸಂಕೀರ್ಣವೂ ಆಗಿದೆ. ಆ ಅನುಭವದ ಜ್ಞಾನಸಂಪಾದನಾಂಶಕ್ಕೆ ವಿದ್ವಾಂಸರು ಹೆಚ್ಚು ಗಮನ ಕೊಟ್ಟಿದ್ದಾರೆ ಮತ್ತು ಆ ಸಂಕೀರ್ಣಾನುಭವವನ್ನು ಮೂಲಾಂಶಗಳಾಗಿ ವಿಭಜಿಸಲು ಪ್ರಯತ್ನಿಸಿದ್ದಾರೆ. ಜ್ಞಾನ ನಮಗೆ ವಿಶಿಷ್ಟವಾದ ಜ್ಞಾನೇಂದ್ರಿಯಗಳಿಂದ ಪ್ರಾಪ್ತವಾಗುತ್ತದೆ. ಕಣ್ಣುಗಳು ನಮಗೆ ಹೊಳವಿನ ಹಾಗೂ ಬಣ್ಣಗಳ ಅನುಭೂತಿಗಳನ್ನು ಮಾತ್ರ ಕೊಡುತ್ತವೆ. ಕಿವಿಗಳು ಸ್ವರಗಳ ಮತ್ತು ಸದ್ದುಗಳ ಅನುಭವಗಳನ್ನು ಕೊಡುತ್ತವೆ. ನೋಟಕ್ಕೆ ಸಿಲುಕುವ ವಸ್ತುವಿಗೆ ಹೇಗೆ ರೂಪವುಂಟೊ ಹಾಗೆಯೇ ಕೇಳಿಬರುವ ಸ್ವರಕ್ಕಾಗಲಿ ರಾಗಕ್ಕಾಗಲಿ ವಿಶಿಷ್ಟವಾದ ರೂಪವಿದೆ. ವಸ್ತುತಃ ಕರಣಜನಿತ ಜ್ಞಾನಕ್ಕೆಲ್ಲ ಸಾಮಾನ್ಯವಾಗಿ ರೂಪ ಮತ್ತು ಆಕಾರಗಳೆಂಬ ಗುಣಗಳುಂಟು. ಈ ಪ್ರತ್ಯಕ್ಷಾಕಾರಗಳನ್ನು ನಾವು ಸಾಮಾನ್ಯವಾಗಿ ಪರೀಕ್ಷಿಸುವುದಾದರೆ, ಅವುಗಳ ರಚನೆ ಒಂದು ಗೊತ್ತಾದ ಮಾದರಿಯಲ್ಲಿರುವುದನ್ನೂ ಅಲ್ಲದೆ, ಕರಣಕ್ಷೇತ್ರದಲ್ಲಿ ಆಯಾ ಅನುಭವಕ್ಕೆ ತಕ್ಕಂಥ ಆಕೃತಿಯನ್ನು ಅದಕ್ಕೆ ಕೊಡುವ ಗತಿಶೀಲವಾದ ರೂಪಣ ವ್ಯಾಪಾರಗಳನ್ನೂ ಕಾಣುತ್ತೇವೆ. ಈ ಚಲನಾತ್ಮಕ ವ್ಯಾಪಾರಗಳ ಲೀಲೆಯನ್ನು ನಾವು ನೋಡುವ ಅಸ್ಪಷ್ಟ ರೂಪಗಳಲ್ಲಿ ಸುಲಭವಾಗಿ ಕಾಣಬಹುದು. ಅಲ್ಲಿ ಕಠಿಣಾನೂಭೂತಿಯ ಅರ್ಥ ಪದೇ ಪದೇ ಬದಲಾಯಿಸುತ್ತಿರುತ್ತದೆ. ಆದ್ದರಿಂದ ಅದ್ಯತನೀಯ ಕಾಲದಲ್ಲಿ ಯಾವ ಬೋಧಾವಸ್ಥಾನೂಭೂತಿಯನ್ನಾದರೂ ಒಟ್ಟಿನ ಪ್ರಜ್ಞಾನುಭೂತಿಗೂ ಮತ್ತು ಜ್ಞಾನ-ಕ್ರಿಯಾ-ಭಾವ ಪ್ರವಾಹಗಳ ಪರಸ್ಪರ ಮೇಳನಕ್ಕೂ ಬೆಲೆಕಟ್ಟುವ ಘಟನೆಯೆಂದು ನಿರೂಪಿಸಬಹುದು.

ಪ್ರಜ್ಞಾನುಭವ ಮಿದುಳಿನ ಬೂದುಬಣ್ಣದ ಭಾಗದ ಮೇಲುಹೊದಿಕೆಯಲ್ಲಿರುವ ನರಗಳ ಕೇಂದ್ರಗಳ ವಿಶಿಷ್ಟಕ್ರಿಯೆಗಳನ್ನು ಅವಲಂಬಿಸಿದೆ. ಸಾಮಾನ್ಯವಾದ ಜೀವದ್ರವಪರಿಮಾಣ ಕೆಲವು ವೈಲಕ್ಷಣ್ಯಗಳು ಪ್ರಜ್ಞಾಕ್ರಿಯೆಯ ನಮೂನೆಗಳನ್ನು ಸ್ವಪ್ನಾವಸ್ಥೆ ಮತ್ತು ಸುಷುಪ್ತಿಗಳಲ್ಲಿ ಹೇಗೋ ಹಾಗೇ ಅಸ್ತವ್ಯಸ್ತವಾಗಿ ಮಾಡಬಹುದು ಅಥವಾ ಉಪಶಮಿಸಬಹುದು. ಆದರೆ ಭೌತವಸ್ತುಗಳನ್ನೂ ಸಂಭವಗಳನ್ನೂ ತಮ್ಮ ಹಿಡಿತಕ್ಕೊಳಪಡಿಸಿಕೊಂಡು ಮಿತಗೊಳಿಸುವ ದೇಶ ಮತ್ತು ಕಾಲಗಳ ಉಪಾಧಿಗಳು ಪ್ರಜ್ಞಾನುಭೂತಿಗಿಲ್ಲ. ದೇಶಕಾಲಗಳ ಚೌಕಟ್ಟಿನ ಮಿತಿಗಳವಡುವುದೇ ಕರಣಗೋಚರ ವಿಷಯದ ಹುರುಳು. ಇದಕ್ಕೆ ಸಂಬಂಧಪಟ್ಟ ಇಂದ್ರಿಯಾನುಭೂತಿಯೂ ದೇಶಕಾಲೀಯ ಹಾಗೂ ಚಿತ್ತ-ಶರೀರ-ಭೌತ ಸ್ಥಿತಿಗಳಿಂದ ನಿರ್ದಿಷ್ಟವಾಗುತ್ತದೆ. ಆದರೆ ಈ ಅನುಭವದ ಪ್ರಜ್ಞೆಮಾತ್ರ ದೇಶಕಾಲೀಯ ಸಂಕೋಲೆಗಳನ್ನು ಕಿತ್ತೊಗೆಯಬಲ್ಲದು. ಭೌತಿಕಘಟನೆಗಳಾವುದಕ್ಕೂ ಸಲ್ಲದ ಸ್ವಾತಂತ್ರ್ಯಸ್ಮøತಿ ಮತ್ತು ಕಲ್ಪನೆಗಳಿಗೆ ಸಂದಿದೆ. ಸದ್ಯದ ಅಥವಾ ಹಳೆಗಾಲದ ಯಾವ ಅನುಭೂತಿಯ ಸ್ಮøತಿಯನ್ನಾಗಲಿ ಕಾಲ ಮಂಕಾಗಿಸದು, ದೇಶ ತಡೆಹಿಡಿಯದು. ಅದರಂತೆಯೇ ನಮ್ಮ ಕಲ್ಪನೆ ದೂರವೂ ವಿಶಾಲವೂ ಆದ ಕ್ಷೇತ್ರಗಳಲ್ಲಿ ಅಲೆದಾಡಬಹುದಲ್ಲದೆ ಹತ್ತಿರದ ಅಥವಾ ದೂರದ ಭವಿಷ್ಯಕ್ಕೂ ಒಳದಾರಿಮಾಡಿಕೊಂಡು ಅಲ್ಲಿ ಕನಸುಗಳನ್ನೂ ಕಾಣಬಲ್ಲದು.

ಪ್ರಜ್ಞಾನುಭೂತಿ ಬಾಹ್ಯವಸ್ತುವೊಂದನ್ನು ಸೂಚಿಸುತ್ತದೆ. ತನ್ನ ತಿಳಿವಿಗೆ ಅಳವಟ್ಟ, ತನಗೆ ಸುಖಕೊಟ್ಟ ಅಥವಾ ತಾನು ಪ್ರತಿಕ್ರಿಯೆ ತೋರಿದ ವಸ್ತುಗಳತ್ತ ಅದು ಯಾವಾಗಲೂ ಬೆರಳಿಟ್ಟು ತೋರುತ್ತದೆ. ಹೊರಲೋಕದಲ್ಲಿ ಇಂದ್ರಿಯಗ್ರಾಹ್ಯವಾದ ವಸ್ತುವಿರಬಹುದು, ಘಟನೆಯಿರುಬಹುದು. ಉದಾ : ಒಂದು ಹಕ್ಕಿ, ಒಂದು ಮರ ಅಥವಾ ಒಂದು ಪಶುಯುದ್ಧ ಇಲ್ಲದಿದ್ದರೆ, ಶರೀರದಲ್ಲೇ ಉತ್ಪನ್ನವಾದ ಒಂದು ಪರಿಸ್ಥಿತಿ (ಹಲ್ಲು ನೋವು, ಹೊಟ್ಟೆ ನುಲಿತ, ವ್ಯಾಯಾಮಾನಂತರದ ಉಲ್ಲಾಸ ಇತ್ಯಾದಿ). ಇಂಥ ಸಂದರ್ಭದಲ್ಲೆಲ್ಲ ಜ್ಞಾನಕ್ಕೆ ವಿಷಯವಾಗಿರುವ ಸಂಭವವೊಂದುಂಟು. ಆದ್ದರಿಂದ ಅದು ಜ್ಞಾತೃವಿಗಿಂತ ಭಿನ್ನವಾದುದು : ಮತ್ತೊಂದು ತರದಲ್ಲಿ ಹೇಳಬೇಕಾದರೆ, ಜ್ಞಾನದ ಅಥವಾ ಪ್ರಜ್ಞಾನುಭೂತಿಯ ವಿಷಯದ ಸೂಚನೆ ಇದರಲ್ಲಿದೆ. ಈ ಅನುಭೂತಿಗೆ ಕರ್ತೃಸ್ಥಾನದಲ್ಲಿ ಯಾವನಿದ್ದಾನೋ ಆ ಪ್ರಜ್ಞಾವಂತ ಅಥವಾ ಆತ್ಮ. ಅವನಿಗಿಂತ ಅದು ಭಿನ್ನವಾದದ್ದು. ಅದರೆ ಅದು, ತಾನು ಹೆಚ್ಚುಕಡಿಮೆ ಆಸ್ಪಷ್ಟವಾಗಿರುವಾಗಲೂ ನೇರವಾದ ಪ್ರತ್ಯಕ್ಷಜ್ಞಾನದ ಅಂಶ.

ಪ್ರಜ್ಞಾನುಭೂತಿ ಅತಿ ಸರಳವಾಗಿದ್ದು ಯಾವುದೋ ಒಂದು ಅಸ್ಪಷ್ಟವಿಷಯ ಸೂಚಿಯಾದ ಬರಿಯ ಇಂದ್ರಿಯೈಕಜ್ಞಾನವಾಗಿದ್ದರೆ. ಆಗ ಅದನ್ನು ಬರಿ ಎಚ್ಚರ ಎಂದು ಕರೆಯಬಹುದು. ಎಲ್ಲೋ ಯಾವುದೋ ಇದೆ ಎನ್ನುವಷ್ಟರ ಮಟ್ಟಿನ ತಿಳಿವಳಿಕೆ ಆಗುಂಟು. ಅದೊಂದು ವಾಸ್ತವಾನುಭೂತಿ, ಆದರೆ ನಾವು ಸೊನ್ನೆಯ ಪ್ರಮಾಣವನ್ನು ಕುರಿತು ಹೇಗೆಯೋ ಹಾಗೆಯೋ ಇದನ್ನು ನೇತಿವಾಕ್ಯಗಳಿಂದಲೇ ವರ್ಣಿಸಬೇಕು. ಆದರೆ ಬರಿ ಎಚ್ಚರ ಸ್ವಲ್ಪ ಕಾಲ ಅನುಭವಿತವಾದ ಬಳಿಕ ತತ್ಸಂಬಧಿಯಾದ ಇತರ ಸೂಚನೆಗಳಿಂದ ಬೇಗ ಪುಷ್ಟಿಗೊಳ್ಳುತ್ತದೆ. ಆ ವಸ್ತುವಿನ ಅನೇಕ ಗುಣಗಳೂ ಮತ್ತು ಅದರ ಪರಿಸರಗಳೂ ಕ್ರಮೇಣ ಅರಿವಿಗೆ ಗೋಚರವಾಗಿ ಅವುಗಳ ಹಿತ ಮನಸ್ಸಿಗೆ ತಟ್ಟುತ್ತದೆ. ಮುಂದೆ ಒಂದೊಂದಾಗಿ ಒದಗಿ ಬರುವ ಬಗೆಬಗೆಯ ಅನುಭವಗಳು ಅದರ ವಿಷಯದಲ್ಲಿ ವಿಶಿಷ್ಟವಾದ ಮನಸ್ಸಿನ ನಿಲವುಗಳನ್ನು ಉದ್ಬೋಧನಗೊಳಿಸುತ್ತವೆ. ಈ ಬರೀ ಅರಿವನ್ನು ಕೂಸು ಹುಟ್ಟಿದ ಒಂದೆರಡು ಗಳಿಗೆಗಳ ಪರಿಯಂತ ಅದು ಪಡುವ ಅನುಭವವೆಂದು ಹೇಳಬಹುದು. ತತ್ಸಮಾನವಾದ ಮತ್ತೊಂದು ಉದಾಹರಣೆಯಾಗಿ, ಒಬ್ಬ ವಯಸ್ಸಾದವನು ಒಂದಾದಮೇಲೊಂದು ಅತಿ ವೇಗದಿಂದ ಬರುತ್ತಿರುವ ರಾಗೋದ್ರಿಕ್ತವಾದ ಬದಲಾವಣೆಗಳನ್ನು ಅವು ತನ್ನ ಹಿಂದಿನ ಎಲ್ಲ ಅನುಭವಗಳಿಗೂ ತೀರ ಭಿನ್ನವಾಗಿರುವ ಕಾರಣದಿಂದ ಹೇಗೆ ಸ್ವಲ್ಪವೂ ಅರಿತುಕೊಳ್ಳಲಾರನೋ ಅರ್ಥಮಾಡಿಕೊಳ್ಳಲಾರನೋ ಹಾಗೆ ಎನ್ನಬಹುದು. ಈ ಬರಿಯೆಚ್ಚರದಲ್ಲಿ ದೇಶಕಾಲೋಪಾದಿಗಳನ್ನು ಕುರಿತು ಅಸ್ಪಷ್ಟಸೂಚನೆಯಿದೆ. ನಿದ್ರಾಜಾಗರಗಳ ನಡುವಣ ನಸುಕಿನಲ್ಲಿ ನಮಗೆ ಕೆಲವೇಳೆ ಇಂಥ ಅನುಭವ ಉಂಟಾಗುತ್ತದೆ. ಮಗು ತನ್ನ ಅನುಭವಗಳನ್ನು ಹೇಳಿಕೊಳ್ಳುವಷ್ಟು ವಯಸ್ಸಿಗೆ ಬಂದ ಮೇಲೆ ಇಂಥ ಬರಿಯೆಚ್ಚರ ಅಪೂರ್ವ. ಆದರೆ ಸಂಕೀರ್ಣವೂ ಅರ್ಥಪೂರ್ಣವೂ ಆದ ಅದರ ಗ್ರಹಿಕೆಗಳು ನಮ್ಮ ಗೋಚರಕ್ಕೆ ಬರುತ್ತವೆ.

ಸಾಮಾನ್ಯವಾಗಿ ಈ ವಿಷಯವನ್ನು ಆಲೋಚಿಸುವ ಎಲ್ಲ ತಜ್ಞರಿಂದಲೂ ಗ್ರಹೀತವಾದ ಅನುಭವಮುಖವೊಂದುಂಟು. ಅದು ಪ್ರಜ್ಞಾನುಭವಕ್ಕೆ ವಿಮುಖವಾದದ್ದು. ಅದರ ಹೆಸರು ಅನುಭವದ ಸುಪ್ತಚೇತನಾವಸ್ಥೆ, ಅಜಾಗೃತಾವಸ್ಥೆ. ಅದು ಮನಸ್ಸಿನ ಅಥವಾ ಗತಿಶೀಲವಾದ ಅದರ ತಿಳಿವಳಿಕೆಗೆ ಬಾರದ ಮನೋರಾಜ್ಯ. ಅನುಭವವೊಂದರ ಅರ್ಥ, ಅದರ ಬಗ್ಗೆ ಮನದ ನಿಲವು ಮತ್ತು ಹುಟ್ಟಿದ ಪ್ರತಿಕ್ರಿಯೆ-ಇವುಗಳನ್ನು ಇದರ ಕಾರ್ಯಗತಿಗಳು ಪ್ರಭಾವಿಸುತ್ತವೆ. ಎಂದು ತಜ್ಞರು ಊಹಿಸುತ್ತಾರೆ. ಸ್ಮರಣಕ್ರಿಯೆಯ ಸ್ವಭಾವವನ್ನು ಕುರಿತು ಪರ್ಯಾಲೋಚಿಸುವಾಗ, ನಾವು ಕೆಲವು ಅನುಭವಗಳನ್ನು ಸುಲಭವಾಗಿ ನೆನಪಿಗೆ ತಂದುಕೊಳ್ಳಬಹುದೆಂಬುದೂ ಅವು ಪ್ರಜ್ಞೆಯನ್ನು ಹೊಕ್ಕು ಅದರ ಬಹುಸ್ಪಷ್ಟ ಕೇಂದ್ರವನ್ನು ತಲುಪಬಲ್ಲವೆಂಬುದೂ ನಮಗೆ ತಿಳಿದು ಬರುತ್ತದೆ. ಇತರ ಅನುಭವಗಳ ಉದ್ಬೋಧನೆಯ ಪರಿಣಾಮವಾಗಿ ಹೆಚ್ಚು ಕಡಿಮೆ ಕಷ್ಟದಿಂದ ನೆನಪಿಗೆ ಬರುವ ಅನುಭವಗಳೂ ಕೆಲವುಂಟು.										 					
 
(ಎಸ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ